೫೭ನೇ ಸಂಸ್ಥಾಪನಾ ದಿನಾಚರಣೆ ಹಾಗೂ ಹಿರಿಯ ಕೃಷಿ ತಂತ್ರಜ್ಞರಿಗೆ ಸನ್ಮಾನ ಸಮಾರಂಭ
ದಿನಾ೦ಕ ೧೮-೧೨-೨೦೨೫ರಂದು ಕೃಷಿ ತಂತ್ರಜ್ಞರ ಸಂಸ್ಥೆಯ ೫೭ನೇ ಸಂಸ್ಥಾಪನಾ ದಿನಾಚರಣೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಸಾಂಪ್ರದಾಯಿಕ ದೇವರ ಪ್ರಾರ್ಥನೆ ಮತ್ತು ಸ್ವಾಗತದ ನಂತರ ನಿವೃತ್ತ ಕೃಷಿ ನಿರ್ದೇಶಕರು ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆಯ ಹಿಂದಿನ ಅಧ್ಯಕ್ಷರಾದ ಡಾ.ಎ.ರಾಜಣ್ಣ ಇವರು ಕಾರ್ಯಕ್ರಮವನ್ನು ದೀಪ ಬೆಳಗಿಸುವುದರೊಂದಿಗೆ ಉದ್ಘಾಟಿಸಿದರು. ಸಂಸ್ಥೆಯ ಉಪಾಧ್ಯಕ್ಷರಾದ ಡಾ.ನಾಗರಾಜುರವರು ಸಂಸ್ಥೆಯು ನಡೆದು ಬಂದ ದಾರಿ ಹಾಗೂ ಸಂಸ್ಥಾಪನಾ ದಿನಾಚರಣೆ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ನಂತರ ಡಾ.ಎ.ರಾಜಣ್ಣ ಇವರು ಮಾತನಾಡುತ್ತಾ ಸಂಸ್ಥಾಪನಾ ದಿನವಾದ ಇಂದು ಹಿರಿಯ ಸದಸ್ಯರನ್ನು ಗುರುತಿಸಿ, ಕರೆದು ಸನ್ಮಾನ ಮಾಡುತ್ತಿರುವ ಪದ್ಧತಿ ಹಾಗೂ ಕಾರ್ಯಕ್ರಮದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದರು ಹಾಗೂ ಸಂಸ್ಥೆಯ ಕಾರ್ಯಕಾರಿ ಸಮಿತಿಗೆ ತಮ್ಮ ಧನ್ಯವಾದಗಳನ್ನು ತಿಳಿಸಿ ಮುಂದೆ ಕೃಷಿ ಸಂಸ್ಥೆಯು ಗಮನಿಸಿ ಮಾಡಬೇಕಾದ ಕೆಲವು ಮುಖ್ಯ ವಿಷಯಗಳನ್ನು ಪ್ರಸ್ತಾಪಿಸಿದರು. ಹಾಜರಿದ್ದ ಎಲ್ಲಾ ಸದಸ್ಯರೂ ಹಾಗೂ ವಿವಿಧ ವರ್ಗಗಳ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ ಸನ್ಮಾನ ಸ್ವೀಕರಿಸಿದ ಹಿರಿಯ ಕೃಷಿ ತಂತ್ರಜ್ಞರಿಗೆ ಅಭಿನಂದನೆ ತಿಳಿಸಿ ತಮಗೆ ನೀಡಿದ ಆಹ್ವಾನ ಮತ್ತು ಅವಕಾಶಕ್ಕೆ ಧನ್ಯವಾದ ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಕಾರ್ಯಕ್ರಮ ಉದ್ಘಾಟಿಸಿದ ಡಾ.ಎ.ರಾಜಣ್ಣನವರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ಸದಸ್ಯರು ಇವರನ್ನು ಸನ್ಮಾನಿಸಿದರು.
ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಸಂಸ್ಥೆಯ ವತಿಯಿಂದ ೬೫ ವರ್ಷ ಪೂರ್ಣಗೊಳಿಸಿದ ೫೫ಕ್ಕೂ ಹೆಚ್ಚಿನ ಹಿರಿಯ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಡಾ.ಎಂ.ಎಸ್.ರೆಡ್ಡಿಯವರು ಹರ್ಷ ವ್ಯಕ್ತಪಡಿಸಿ ತಮ್ಮ ಅನಿಸಿಕೆಗಳನ್ನು ಹಂಚಿಕೊ೦ಡರು. ಶ್ರೀ.ಚನ್ನಪ್ಪ ಅಂಗಡಿಯವರು ತಾವು ಬರೆದು ಸಂಯೋಜಿಸಿದ ಐ.ಎ.ಟಿ ಗೀತೆಯನ್ನು ಬಿಡುಗಡೆಗೊಳಿಸಿ ಅನುಮೋದಿಸಿಕೊಂಡು ಕಾರ್ಯಕ್ರಮದ ನಿರೂಪಣೆ ನಡೆಸಿದರು. ಸಂಸ್ಥೆಯ ಅಧ್ಯಕ್ಷರಾದ ಡಾ.ಎ.ಬಿ.ಪಾಟೀಲರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಸಂಸ್ಥೆಯ ಹಿಂದಿನ ಸಾಧನೆ ಬಗ್ಗೆ ತಿಳಿಸಿ ಮುಂದಿನ ಯೋಜನೆಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ವ್ಯವಸ್ಥಾಪನ ಸಮಿತಿಯ ಎಲ್ಲಾ ಗೌರವಾನ್ವಿತ ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಆಜೀವ ಸದಸ್ಯರು ಹಾಗೂ ಸನ್ಮಾನಿತರಾದ ಕುಟುಂಬದವರು ಹಾಜರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು.
ಅಂತಿಮವಾಗಿ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಡಾ.ಎಂ.ಭೀಮಣ್ಣನವರ ವಂದನಾರ್ಪಣೆಯೊAದಿಗೆ ಸಭೆ ಮುಕ್ತಾಯಗೊಂಡಿತು.
